Saturday, March 22, 2008

ಯೂ ಹಿ ಪೆಹ್ಲೂ ಮೈ ಬೈಠೇ ರಹೋ
ಆಜ್ ಜಾನೇ ಕಿ ಜಿದ್ ನಾ ಕರೋ...

ಅವತ್ತು ಹೋಗಲಾರೆ ಅಂತಿದ್ದ ನಾ, ಹೊರಡುವಾ ಅನ್ನುತಿದ್ದ ನೀ
ಈ ಹಾಡು ಹೇಳಿದ್ದರೆ ನಿಲ್ಲುತ್ತಿದ್ದೆಯಾ?

ಚಂದ್ ಘಡಿಯಾ ಯಹೀ ಹೈ ಜೊ ಆಜಾದ್ ಹೈ
ಅಂತ ಗೊತ್ತಿರಲಿಲ್ಲವಲ್ಲ ನಿನಗೆ!
ಅವತ್ತು ಕಳೆದದ್ದನ್ನ ಹೆಕ್ಕುವು ಪ್ರಯತ್ನ ಎಷ್ಟು ಮಾಡಿದ್ರೂ, ಕೈಜಾರಿದ್ದು ಕೊಚ್ಚಿಹೋಗಿತ್ತು...

ಕೈಯಲ್ಲಿನ್ನೂ ಜೀವವಿದೆ ಅನ್ನೋ ಭ್ರಮೆಯಲ್ಲಿ ಮಿಂಚಿದ ನಿನ್ನ ಕಣ್ಣುಗಳನ್ನ ನೋಡಿದಾಗ ಆ ದೀಪಗಳನ್ನಾರಿಸೋ ಮನಸ್ಸು ಬರಲಿಲ್ಲ ಕಣೋ...ಇಂದು ದೀಪವಿರದ ದಾರಿಗಳಲಿ ನನಗೆ ಆ ದಿನದ ನೆನಪು... ಅವತ್ತು ನಿನ್ನ ದಾರಿಯನ್ನು ತಡೆಯದಿದ್ದಿದ್ದರೆ...

Tuesday, January 29, 2008

ಉಳಿದದ್ದು ಆಕಾಶ

ಎಲ್ಲ ಮರೆತಿರುವಾಗ ಇಲ್ಲಸಲ್ಲದ ನೆಪವ ಹೂಡಿ...
ಇವತ್ತು ನಿನ್ನ ಹತ್ರ ತುಂಬಾ ಮಾತಾಡಬೇಕನ್ನಿಸ್ತಾ ಇದೆ...

ಬಹಳ ಗಟ್ಟಿಗಿತ್ತಿ, ಎಲ್ಲ ದಾಟಿ ನಿಂತೆ ಅಂದುಕೊಳ್ಳೋ ಘಳಿಗೆಗೆ
ಕಲ್ಲಿನಂದದಿ ಅಲ್ಲ... ಸಮುದ್ರದ ಅಲೆಗಳೋಪಾಧಿಯಲ್ಲಿ ಉಕ್ಕಿ ಸೆಳೆವ ನೆನಪುಗಳಿಗೆ ಕನಸಿನಾಸರೆಯಿಲ್ಲ
ನೆನೆದು ಬರಡಾಗುವ ಈ ಪರಿ ಬೇಡ ಕಣೋ ನನಗೆ

ಒಮ್ಮೆ ಸಿಗಲಾರದೇ ಆ ಹೆಗಲಿನಾಸರೆ, ಆ ಮಡಿಲಿನ ಬೆಚ್ಚನೆಯ ವಾತ್ಸಲ್ಯ...

ವಿಚಿತ್ರ ಏನು ಗೊತ್ತಾ, ನೀ ಕಣ್ಣಮುಂದಿದ್ದರೂ ನನಗೆ ನನ್ನ ನೆನಪುಗಳ ರಾಜಕುಮಾರನ ಹುಡುಕಾಟ. ಅವ ಇನ್ನೆಂದೂ ಸಿಗದ ಹಾಗೆ ಕಳೆದುಹೋಗಿದ್ದಾನೆ, ಎಲ್ಲ ಸರಿಯಿದೆಯೆನ್ನುವ ನನ್ನ-ನಿನ್ನ ಹೊಸ ವಿಭ್ರಮೆಯ ಮಧ್ಯೆ ಎಲ್ಲೋ...
ಮನದಾಳದ ಮಾತುಗಳಿಗಿನ್ನು ಮೋಕ್ಷವಿಲ್ಲ

Friday, August 24, 2007

ಎಲ್ಲ ಮುಗಿದ ಸ್ಮಶಾನಮೌನವೋ
ಇದಕ್ಕಿಂತ ಮೀರಿದ್ದೇನೂ ಆಗಲಾರದೆನ್ನುವ ವಿಶ್ವಾಸವೋ
ಇಷ್ಟಾದರೂ ಕೈಯಲ್ಲಿ ಅಷ್ಟು ಉಳಿದಿದೆಯೆಂದು ನೆಮ್ಮದಿಯೋ
ನಿನ್ನ ಖುಷಿ ಎಲ್ಲೆ ಮೀರದ್ದನ್ನು ಕಂಡು ಸುಮ್ಮನಾಗುವ ಸ್ವಾರ್ಥವೋ
ಕಣ್ಣಲ್ಲಿ ಒಂದು ಹನಿ ಇಲ್ಲ ಇಂದು
ಕಟ್ಟೆಕೊಚ್ಚಿದ ಪ್ರವಾಹದಂತೆ ಹರಿಯುತ್ತಿದ್ದಿದ್ದೆಲ್ಲ
ಹರಿದು ಸುರಿದು ಖಾಲಿಯಾಗಿಬಿಟ್ಟೆನೇನೋ?

ವೀಣೆಯೆಲ್ಲೋ ತಂತಿಯಾಚೆಗೆ ಮಿಡಿಯುತ್ತಲೇ ಇದೆ
ನನಗಾಗಿ ಕಣ್ಣು ತುಂಬುವುದಿಲ್ಲ ನಿಜ
ನಿನಗಾಗಿ ಎರಡು ಹನಿ
ಯಾವತ್ತಿಗೂ ಇರುತ್ತದೆ

Friday, August 17, 2007

ಅನಿವಾರ್ಯದ ಅರಿವು ಆಳಕ್ಕಿಳಿಯಲೇಬೇಕಾದ ಘಳಿಗೆ ಹತ್ತಿರಾಗುತ್ತಿದೆ
ನಿನ್ನ ತಳಮಳ, ನನ್ನ ಕಣ್ಣೀರು
ಮಾತಾಗದೇ ಮನಸ್ಸಿಗಿಳಿದಾಗ
ನಗಬೇಕೋ ಅಳಬೇಕೋ ಅರ್ಥವಾಗದ ನಿಟ್ಟುಸಿರು
ಇದೇ ಕೊನೆಯೋ, ಮುಂದೊಂದು ಹೊಸ ದಾರಿ ನಮ್ಮ ಜೊತೆಗೆ ಇದೆಯೋ...
ಪರ್ವಕಾಲ ಕಳೆದಾಗ ಉಳಿಯುವುದೆಷ್ಟು? ಬದುಕಿಗಾದೀತಾ?
ಇಷ್ಟೆಲ್ಲ ಇದ್ದವ ಸ್ವಲ್ಪ ಗಟ್ಟಿಗನಾಗಿದ್ದಿದ್ದರೆ ಅನ್ನುವ ಕೋಪ ಮಿಂಚುತ್ತದೆ
ಈಗ ಕರೆದರೆ ಹೋದೀಯಾ ಅನ್ನುತ್ತದೆ ಅಹಂಕಾರ!
ನೆನ್ನೆಯನ್ನು ಮರೆತು ಇವತ್ತನ್ನು ಒಪ್ಪದಿದ್ದರೆ ಪೂರಾ ಖಾಲಿಯಾಗಿಬಿಡುವ ಭಯ
ನಿನಗೊಂದು ಮನದಾಳದ ಹಾರೈಕೆ ನೀಡದಿದ್ದರೆ ಅದೆಂಥ ಪ್ರೀತಿ ಅನ್ನುವ ಮನ

ಬಾಳ ಹಾದಿಯಲಿ ಬೇರೆಯಾದರೂ ಚಂದಿರ ಬರುವನು ನಮ್ಮ ಜೊತೆ...
ನಿನ್ನ ಹಾದಿಯಲಿ ಹೂವಿರಲಿ ಗೆಳೆಯ

Monday, July 23, 2007

आज् फिर् दिल् नॆ इक् तमन्ना की
आज् फिर् दिल् कॊ हम् नॆ समझाया...
ಫೋನ್ ಮಾಡೋಣ ಅಂತ ತುಂಬಾ ಅನ್ನಿಸಿತ್ತು, ಆದರೂ ಸುಮ್ಮನಾದೆ ಅಂತ ಒಂದು ವರ್ಷಕ್ಕೆ ಹಿಂದೆ ನೀನಂದಿದ್ದೆ...ಇವತ್ತು ಆ ಸಾಲುಗಳು ನನ್ನ ಪಾಲಿಗೆ!
ಒಂದು ನೋವಿಗೆ ಒಂದು ನಲಿವಿತ್ತು ...
ಏನಾದರೂ ಏನಿದ್ದರೂ, ಇಲ್ಲದಿದ್ದರೂ, ನೀನಿದ್ದೆ,ಕಣ್ಣೊರಸಿ ನಗೆಯರಳಿಸುವುದಕ್ಕೆ!
ಇದ್ದೂ ಇಲ್ಲದ ಇಂದಿನಲ್ಲಿ ನಲಿವೂ ನೋವಾಗಿ ನಿಂತಿಬಿಟ್ಟಿದೆಯೇನೋ...
ಹಾಡಲಾರದ ಹಾಡು, ಆಡಲಾರದ ಮಾತು ತುಟಿಯಂಚಲ್ಲಿ ನಿಂತು ನೋಯಿಸುವುದು ಯಾತಕ್ಕೋ!

हम् जिसॆ गुन्गुना नहि सकतॆ
वक्त् नॆ ऐसा गीत् क्यूं गाया...

Tuesday, July 10, 2007

ಒಂದು ವರ್ಷದ ನೆನಪುಗಳು
ಮತ್ತೆ ಇವತ್ತು ಲಾಗ್ ಇನ್ ಆದಾಗ ನಿನ್ನ ಮುದ್ದು ಮೈಲ್ ಕುಳಿತು ಕಣ್ಣು ಹೊಡೆದು ಒಂದು ಸಣ್ಣ ಶಾಕ್ ಕೊಟ್ಟು... ಆಗಲ್ಲವಾ? ಮತ್ತೆ ಆ ದಿನ ಬರೋದಿಲ್ಲವ? ಎಲ್ಲ ಸರಿಯಿದ್ದಿದ್ದರೆ ಇವತ್ತು ಕೂತು ವರ್ಷದ ಸವಿಯನ್ನೆಲ್ಲ ಮತ್ತೆ ಸವಿಯಬಹುದಿತ್ತು...ಮೊದಲ ನಗೆ... ಮೊದಲ ಮಳೆ...ಜೊತೆಯಾಗಿ ಮೊದಲು ನಡೆದ ದಾರಿ... ನೆನಪಿದೆಯೆ ಮೊದಲ ಮಿಲನ...ನೆನಪಿದೆಯೆ ಮೊದಲ ಕವನ ಅಂತ ಕೇಳೋಕೂ ಆಗದ ದಿನ ಬರುತ್ತೆ ಅಂತ ಅನ್ನಿಸಿರಲೇ ಇಲ್ಲ ಅವತ್ತು! ನೆನಪುಗಳು ಇಬ್ಬರನ್ನೂ ಕಾಡುತ್ತಿರೋದು... ವೇದ್ಯಾವಾಗಿಯೂ ಹಾಗೇ ಮುಂದೆ ಹೋಗೋದು ಕಷ್ಟವಲ್ಲವೇನೋ ಹುಡುಗ! ದಿನಪೂರ್ತಿ ನೀ ಜೊತೆಯಾಗಿ ಕಳೆದಾಗ ನೀನೂ ನನ್ನಂತೇ ನೆನಪಿನ ಮಳೆಯಲ್ಲಿ ಸಿಕ್ಕಿದ್ದೀ ಅನ್ನಿಸಿ ಪ್ರೀತಿ ವಿಷಾದಗಳೆಲ್ಲ ಇನ್ನಷ್ಟು ಗಾಢವಾಗಿ ಆವರಿಸಿಬಿಟ್ಟವು ಕಣೋ...

Monday, April 9, 2007

ನಿನಗೊಂದು ಹಾಡು