Friday, August 24, 2007

ಎಲ್ಲ ಮುಗಿದ ಸ್ಮಶಾನಮೌನವೋ
ಇದಕ್ಕಿಂತ ಮೀರಿದ್ದೇನೂ ಆಗಲಾರದೆನ್ನುವ ವಿಶ್ವಾಸವೋ
ಇಷ್ಟಾದರೂ ಕೈಯಲ್ಲಿ ಅಷ್ಟು ಉಳಿದಿದೆಯೆಂದು ನೆಮ್ಮದಿಯೋ
ನಿನ್ನ ಖುಷಿ ಎಲ್ಲೆ ಮೀರದ್ದನ್ನು ಕಂಡು ಸುಮ್ಮನಾಗುವ ಸ್ವಾರ್ಥವೋ
ಕಣ್ಣಲ್ಲಿ ಒಂದು ಹನಿ ಇಲ್ಲ ಇಂದು
ಕಟ್ಟೆಕೊಚ್ಚಿದ ಪ್ರವಾಹದಂತೆ ಹರಿಯುತ್ತಿದ್ದಿದ್ದೆಲ್ಲ
ಹರಿದು ಸುರಿದು ಖಾಲಿಯಾಗಿಬಿಟ್ಟೆನೇನೋ?

ವೀಣೆಯೆಲ್ಲೋ ತಂತಿಯಾಚೆಗೆ ಮಿಡಿಯುತ್ತಲೇ ಇದೆ
ನನಗಾಗಿ ಕಣ್ಣು ತುಂಬುವುದಿಲ್ಲ ನಿಜ
ನಿನಗಾಗಿ ಎರಡು ಹನಿ
ಯಾವತ್ತಿಗೂ ಇರುತ್ತದೆ

Friday, August 17, 2007

ಅನಿವಾರ್ಯದ ಅರಿವು ಆಳಕ್ಕಿಳಿಯಲೇಬೇಕಾದ ಘಳಿಗೆ ಹತ್ತಿರಾಗುತ್ತಿದೆ
ನಿನ್ನ ತಳಮಳ, ನನ್ನ ಕಣ್ಣೀರು
ಮಾತಾಗದೇ ಮನಸ್ಸಿಗಿಳಿದಾಗ
ನಗಬೇಕೋ ಅಳಬೇಕೋ ಅರ್ಥವಾಗದ ನಿಟ್ಟುಸಿರು
ಇದೇ ಕೊನೆಯೋ, ಮುಂದೊಂದು ಹೊಸ ದಾರಿ ನಮ್ಮ ಜೊತೆಗೆ ಇದೆಯೋ...
ಪರ್ವಕಾಲ ಕಳೆದಾಗ ಉಳಿಯುವುದೆಷ್ಟು? ಬದುಕಿಗಾದೀತಾ?
ಇಷ್ಟೆಲ್ಲ ಇದ್ದವ ಸ್ವಲ್ಪ ಗಟ್ಟಿಗನಾಗಿದ್ದಿದ್ದರೆ ಅನ್ನುವ ಕೋಪ ಮಿಂಚುತ್ತದೆ
ಈಗ ಕರೆದರೆ ಹೋದೀಯಾ ಅನ್ನುತ್ತದೆ ಅಹಂಕಾರ!
ನೆನ್ನೆಯನ್ನು ಮರೆತು ಇವತ್ತನ್ನು ಒಪ್ಪದಿದ್ದರೆ ಪೂರಾ ಖಾಲಿಯಾಗಿಬಿಡುವ ಭಯ
ನಿನಗೊಂದು ಮನದಾಳದ ಹಾರೈಕೆ ನೀಡದಿದ್ದರೆ ಅದೆಂಥ ಪ್ರೀತಿ ಅನ್ನುವ ಮನ

ಬಾಳ ಹಾದಿಯಲಿ ಬೇರೆಯಾದರೂ ಚಂದಿರ ಬರುವನು ನಮ್ಮ ಜೊತೆ...
ನಿನ್ನ ಹಾದಿಯಲಿ ಹೂವಿರಲಿ ಗೆಳೆಯ

Monday, July 23, 2007

आज् फिर् दिल् नॆ इक् तमन्ना की
आज् फिर् दिल् कॊ हम् नॆ समझाया...
ಫೋನ್ ಮಾಡೋಣ ಅಂತ ತುಂಬಾ ಅನ್ನಿಸಿತ್ತು, ಆದರೂ ಸುಮ್ಮನಾದೆ ಅಂತ ಒಂದು ವರ್ಷಕ್ಕೆ ಹಿಂದೆ ನೀನಂದಿದ್ದೆ...ಇವತ್ತು ಆ ಸಾಲುಗಳು ನನ್ನ ಪಾಲಿಗೆ!
ಒಂದು ನೋವಿಗೆ ಒಂದು ನಲಿವಿತ್ತು ...
ಏನಾದರೂ ಏನಿದ್ದರೂ, ಇಲ್ಲದಿದ್ದರೂ, ನೀನಿದ್ದೆ,ಕಣ್ಣೊರಸಿ ನಗೆಯರಳಿಸುವುದಕ್ಕೆ!
ಇದ್ದೂ ಇಲ್ಲದ ಇಂದಿನಲ್ಲಿ ನಲಿವೂ ನೋವಾಗಿ ನಿಂತಿಬಿಟ್ಟಿದೆಯೇನೋ...
ಹಾಡಲಾರದ ಹಾಡು, ಆಡಲಾರದ ಮಾತು ತುಟಿಯಂಚಲ್ಲಿ ನಿಂತು ನೋಯಿಸುವುದು ಯಾತಕ್ಕೋ!

हम् जिसॆ गुन्गुना नहि सकतॆ
वक्त् नॆ ऐसा गीत् क्यूं गाया...

Tuesday, July 10, 2007

ಒಂದು ವರ್ಷದ ನೆನಪುಗಳು
ಮತ್ತೆ ಇವತ್ತು ಲಾಗ್ ಇನ್ ಆದಾಗ ನಿನ್ನ ಮುದ್ದು ಮೈಲ್ ಕುಳಿತು ಕಣ್ಣು ಹೊಡೆದು ಒಂದು ಸಣ್ಣ ಶಾಕ್ ಕೊಟ್ಟು... ಆಗಲ್ಲವಾ? ಮತ್ತೆ ಆ ದಿನ ಬರೋದಿಲ್ಲವ? ಎಲ್ಲ ಸರಿಯಿದ್ದಿದ್ದರೆ ಇವತ್ತು ಕೂತು ವರ್ಷದ ಸವಿಯನ್ನೆಲ್ಲ ಮತ್ತೆ ಸವಿಯಬಹುದಿತ್ತು...ಮೊದಲ ನಗೆ... ಮೊದಲ ಮಳೆ...ಜೊತೆಯಾಗಿ ಮೊದಲು ನಡೆದ ದಾರಿ... ನೆನಪಿದೆಯೆ ಮೊದಲ ಮಿಲನ...ನೆನಪಿದೆಯೆ ಮೊದಲ ಕವನ ಅಂತ ಕೇಳೋಕೂ ಆಗದ ದಿನ ಬರುತ್ತೆ ಅಂತ ಅನ್ನಿಸಿರಲೇ ಇಲ್ಲ ಅವತ್ತು! ನೆನಪುಗಳು ಇಬ್ಬರನ್ನೂ ಕಾಡುತ್ತಿರೋದು... ವೇದ್ಯಾವಾಗಿಯೂ ಹಾಗೇ ಮುಂದೆ ಹೋಗೋದು ಕಷ್ಟವಲ್ಲವೇನೋ ಹುಡುಗ! ದಿನಪೂರ್ತಿ ನೀ ಜೊತೆಯಾಗಿ ಕಳೆದಾಗ ನೀನೂ ನನ್ನಂತೇ ನೆನಪಿನ ಮಳೆಯಲ್ಲಿ ಸಿಕ್ಕಿದ್ದೀ ಅನ್ನಿಸಿ ಪ್ರೀತಿ ವಿಷಾದಗಳೆಲ್ಲ ಇನ್ನಷ್ಟು ಗಾಢವಾಗಿ ಆವರಿಸಿಬಿಟ್ಟವು ಕಣೋ...

Monday, April 9, 2007

ನಿನಗೊಂದು ಹಾಡು

Thursday, March 22, 2007

ಯಾವ ಮಾತೂ
ಯಾರ ಮೌನವೂ
ನನ್ನ ಮನಸ್ಸಿಗೆ ತಾಗದಷ್ಟು
ಎಲ್ಲದರಿಂದ ದೂರ ಹೋಗಿಬಿಡಬೇಕನ್ನಿಸುತ್ತೆ

Tuesday, March 20, 2007

ಎದೆಯೊಳಗಿನ ಮಾತುಗಳನ್ನ ಕೊಂದು ಬದುಕುವುದು ಮಾತುಗಳು ಸಾಯೋದಕ್ಕಿಂತ ಕಷ್ಟವೇನೋ ಅನ್ನಿಸುತ್ತಿದೆ! ಅಥವಾ... ಅಷ್ಟರ ಮಟ್ಟಿಗೆ ದೈವದ ಕೈ ನಮ್ಮ ಮೇಲಿದೆ ಅಂತ ತೃಪ್ತರಾಗಬೇಕೇನೋ...
ನಿನ್ನ ನೆನಪು - ಕನಸುಗಳ ನೋವು ಅವುಗಳಿಲ್ಲದ ನಿರ್ಲಿಪ್ತತೆಗಿಂತ ಅಪ್ಯಾಯಮಾನ...
ನೋವಿದ್ದರೂ ಅಲ್ಲಿ ನೀನಿದ್ದೀಯಲ್ಲ!

Friday, March 16, 2007

ಗೋಡೆಗಳು

ನಮ್ಮಿಬ್ಬರ ಮಧ್ಯೆ
ಗೋಡೆಗಳೆಲ್ಲ ಒಡೆದುಬಿದ್ದು
ಆತ್ಮಸಖ್ಯದ ಹೊಸ್ತಿಲಲ್ಲಿ ನಿಂತಾಗ
ಹೊಸ್ತಿಲು ದಾಟುವ ಬದಲು
ಹೊಸ ಗೋಡೆ ಕಟ್ಟುವಂತಾಗಿ
ಆಗ
ಗೋಡೆಗಳಿಗೂ ಸ್ವಲ್ಪ ನೋವಾಗಿರಬಹುದಾ?
ಹೆಚ್ಚೇನೂ ಕೇಳಲಿಲ್ಲ
ಮೇಲೆ ಕೂತು ಮಜಾ ನೋಡುತ್ತಿರೋ ಆ ದೊಡ್ಡವನಲ್ಲಿ

ನಿನ್ನೆದೆಗೊರಗಿ
ನಿನ್ನ ತೋಳಲ್ಲಿ ಬೆಚ್ಚಗೆ ಮಗುವಾಗಿ ಜೀವನ ಜೇನಾಗಿಸಬಿಡು ಅಂದೆ ಅಷ್ಟೆ...

ಅಥವಾ ನಾ ಕೇಳಿದ್ದು ಅವನಿಗೂ ದುಬಾರಿಯನ್ನಿಸೋ ಅಷ್ಟು ಅಮೂಲ್ಯವೇನೋ
ಅವನ ಉತ್ತರ ಗೊತ್ತಿಲ್ಲ
ನನ್ನ ಹೃದಯವಂತೂ ಹೌದೆನುತಿದೆ
ಎಷ್ಟಂದರೂ ಅದಕ್ಕೆ ನಿನ್ನೊಲುಮೆಗೆ ಬೆಲೆ ಕಟ್ಟಲಾಗದು ಅನ್ನೋ ಸತ್ಯ
ಮೇಲೆ ಕೂತವನಿಗಿಂತ ಚೆನ್ನಾಗಿ ಗೊತ್ತಿದೆ ಅಲ್ಲ್ವಾ
ಈ ಹೃದಯದ ಒಂದೊಂದು ತುಡಿತವೂ ಅದನ್ನೇ ಹಾಡುತ್ತಿದೆ
ಎಂದಾದರೊಂದು ದಿನ ಮೇಲಿನವರೆಗೂ ಕೇಳೀತೇನೋ ಅನ್ನೋ ಹುಚ್ಚು ಹಂಬಲ ಇರಬೇಕು!

Monday, March 5, 2007

ನನ್ನ ದಾರಿ ಕಾಯುತ್ತಾ ನೀನು ರಸ್ತೆ ತುದಿಯಲ್ಲಿ ನಿಲ್ಲುತ್ತಿದ್ದ ದಿನಗಳಲ್ಲಿ...
ಆ ರಸ್ತೆ ಮೇಲೂ ಸ್ವಲ್ಪ ಜಾಸ್ತಿನೇ ಪ್ರೀತಿ ಬರುತಿತ್ತು!
ಗಲ್ಲದ ಮೇಲೆ ಕೈ ಇಟ್ಟು, ರಸ್ತೆಯಲ್ಲಿ ನೋಟ ನೆಟ್ಟು ನಿಂತು...
ನಾ ಕಣ್ಣಿಗೆ ಬಿದ್ದ ತಕ್ಷಣ ಹೂನಗೆಯಿಂದ ಹೃದಯ ಅರಳಿಸುತ್ತಿದ್ದ ನೀನು
ಕಾಣದೇ...
ಈಗ
ಅ ರಸ್ತೆ ಮೇಲೂ ಕೋಪ ಬರುತ್ತೆ! ಹಾಗೇ...
ಅದೂ ನಿನ್ನ ದಾರಿ ಕಾದು ಕಾದು ಸೋತಿದೆಯೇನೋ ಅನ್ನಿಸಿ ಅದರ ಮೇಲೆ ಅನುಕಂಪ...

Friday, March 2, 2007

ದಣಿದ ಮನಕ್ಕೆ ತಂಪಾಗಿ...
ಮೊದಮೊದಲು ಭುವಿಗಿಳಿದ ಮಳೆ ಹನಿಯಂತೆ ಮುದ್ದಾಗಿ ಮನದಾಳಕ್ಕಿಳಿದೆ...

ಬೆಳಗಾದರೆ ನಿನ್ನ ದನಿ ಕೇಳುವ ಖುಶಿ, ನಿನ್ನ ಮಾತುಗಳಲ್ಲಿ ಕರಗಿಹೋಗೋ ಸುಖ... ಸಂಜೆ ಯಾವಾಗ ಆಗುತ್ತೋ ಅಂತ ನಿನ್ನ ಆ ಮಿಂಚುಗಣ್ಣುಗಳಲ್ಲಿ ಬಾಳಹಾದಿಯ ಕನಸುಗಳು ಅರಳೋದನ್ನ ನೋಡ್ತಾ ನಿನ್ನ ಕಿರುನಗೆಯ ಬೆಳಕಲ್ಲಿ ತೊಯ್ದುಹೋಗೋದಕ್ಕೆ ಕಾಯೋ ಸಂಭ್ರಮ...

ಮಳೆ ನಿಂತು ಮೋಡ ಚದುರಿ ಉರಿಬಿಸಿಲು ಸುಡುತ್ತಿರುವಾಗ ಬೆಳಿಗ್ಗೆ ಯಾಕೆ ಆಗುತ್ತೋ ಅನ್ನಿಸಿದರೆ, ಸಂಜೆಗಳು ಭಾರವಾಗಿ ಹೊರಗಿಲ್ಲದ ಮಳೆ ಒಳಗೆ ಕಣ್ಣೀರಾಗಿ ಹರಿದರೆ ನಾನು ಕಾರಣ ಅಲ್ಲ ಅಲ್ಲ್ವಾ...

ಸಂಜೆಗಳು ಮತ್ತೆ ಸಹನೀಯವಾದರೂ ಆಗುತ್ತವಾ ಅನ್ನೋ ಉತ್ತರವಿಲ್ಲದ ಪ್ರಶ್ನೆಯೊಂದಿಗೆ ಮತ್ತದೇ ಬೇಸರದ ಇನ್ನೊಂದು ಸಂಜೆಯೆಡೆಗೆ ನಡಿಯುತ್ತಾ...

Tuesday, February 13, 2007

ಮಿಂಚುಕಂಗಳ ಮುದ್ದು ಹುಡುಗ...
ಆ ಕಣ್ಣುಗಳಲ್ಲೇ ನನ್ನ ಕನಸುಗಳನ್ನ ಬೆಚ್ಚಗೆ ಬಚ್ಚಿಟ್ಟುಕೊಂಡು ಹೊರಟುಹೋಗ್ತೀನಿ ಅನ್ನುತೀಯಲ್ಲ... ಕನಸುಗಳನ್ನ ಬಿಟ್ಟು ಹೇಗೆ ಇರಲಿ...

ಹೆಗಲು ಕೊಟ್ಟು, ಬುದ್ಧಿ ಹೇಳಿ, ತಿದ್ದಿ, ತೀಡಿ, ಆಡಿ, ಮುದ್ದು ಮಾಡಿ ನನ್ನ ಪ್ರಪಂಚಾನೇ ಆಗಿಬಿಟ್ಟೆ... ಈಗ ನನಗೆ ಭೂಮಿ ಕುಸೀತಿದೆ ಅನ್ನಿಸಿದ್ರೆ ಮತ್ತೆ ನಿನ್ನ ತೋಳಲ್ಲಿ ಜಾಗ ಕೊಡೋದಿಲ್ಲ ಅನ್ನುತೀಯ?

ಹಾಡಲ್ಲಿ ನೀನು, ಹೂವಲ್ಲಿ ನೀನು... ನೋವಲ್ಲಿ, ನಗುನಲ್ಲಿ... ಕಣ್ಣಲ್ಲಿ, ಕಣ್ಣೀರಲ್ಲಿ... ನೀನಿಲ್ಲದೇ ಪ್ರಪಂಚಾನ ಹೆಂಗೆ ನೋಡೋದು ಮರೆತುಬಿಟ್ಟಿದೀನೋ... ಈಗ ಏನೂ ಕಾಣಿಸೋದಿಲ್ಲ... ನೀನು ಮಾತ್ರ ಕಣ್ಣು ಮುಚ್ಚಿದ್ರೂ ಕನಸಾಗಿ ಕಾಡುತೀಯಲ್ಲೋ...
ಒಡೆದ ಕನ್ನಡಿಯಲ್ಲೇ ಮುಖ ನೋಡಿಕೊಳ್ಳೋ ಹುಚ್ಚು ಹಿಡಿದಿದೆ ನನಗೆ!

ಕನಸು ಕಂಗಳ ಕಥೆ?

ಬಾಳ ಹಾದಿಯಲಿ ಕೈ ಜಾರಿ ಬಿದ್ದ ಮುತ್ತುಗಳೆಷ್ಟೋ... ಅವುಗಳಿಗಾಗಿ...ಹೃದಯದಲ್ಲೆಲ್ಲೋ ಬೆಚ್ಚಗೆ ಬಚ್ಚಿಟ್ಟ ಒಂದಿಷ್ಟು ಸವಿ ನೆನಪುಗಳಿಗಾಗಿ, ಕೈಗೆಟುಕದ ಕನಸುಗಳಿಗಾಗಿ ಒಂದು ಪುಟ್ಟ ಕಿರುದಾರಿ, ಕನಸಿನ ದಾರಿ... ವಾಸ್ತವದ ವೈಚಿತ್ರ್ಯಗಳು ಮನಸ್ಸನ್ನು ಮುದ್ದಿಸಲು ಮರೆತಾಗ ಈ ಕನಸುಗಳ ತೆಕ್ಕೆಗೆ ಜಾರಿ ಒಂದಿಷ್ಟು ಕಿರುನಗೆಯನ್ನರಳಿಸಲು...