Thursday, March 22, 2007

ಯಾವ ಮಾತೂ
ಯಾರ ಮೌನವೂ
ನನ್ನ ಮನಸ್ಸಿಗೆ ತಾಗದಷ್ಟು
ಎಲ್ಲದರಿಂದ ದೂರ ಹೋಗಿಬಿಡಬೇಕನ್ನಿಸುತ್ತೆ

Tuesday, March 20, 2007

ಎದೆಯೊಳಗಿನ ಮಾತುಗಳನ್ನ ಕೊಂದು ಬದುಕುವುದು ಮಾತುಗಳು ಸಾಯೋದಕ್ಕಿಂತ ಕಷ್ಟವೇನೋ ಅನ್ನಿಸುತ್ತಿದೆ! ಅಥವಾ... ಅಷ್ಟರ ಮಟ್ಟಿಗೆ ದೈವದ ಕೈ ನಮ್ಮ ಮೇಲಿದೆ ಅಂತ ತೃಪ್ತರಾಗಬೇಕೇನೋ...
ನಿನ್ನ ನೆನಪು - ಕನಸುಗಳ ನೋವು ಅವುಗಳಿಲ್ಲದ ನಿರ್ಲಿಪ್ತತೆಗಿಂತ ಅಪ್ಯಾಯಮಾನ...
ನೋವಿದ್ದರೂ ಅಲ್ಲಿ ನೀನಿದ್ದೀಯಲ್ಲ!

Friday, March 16, 2007

ಗೋಡೆಗಳು

ನಮ್ಮಿಬ್ಬರ ಮಧ್ಯೆ
ಗೋಡೆಗಳೆಲ್ಲ ಒಡೆದುಬಿದ್ದು
ಆತ್ಮಸಖ್ಯದ ಹೊಸ್ತಿಲಲ್ಲಿ ನಿಂತಾಗ
ಹೊಸ್ತಿಲು ದಾಟುವ ಬದಲು
ಹೊಸ ಗೋಡೆ ಕಟ್ಟುವಂತಾಗಿ
ಆಗ
ಗೋಡೆಗಳಿಗೂ ಸ್ವಲ್ಪ ನೋವಾಗಿರಬಹುದಾ?
ಹೆಚ್ಚೇನೂ ಕೇಳಲಿಲ್ಲ
ಮೇಲೆ ಕೂತು ಮಜಾ ನೋಡುತ್ತಿರೋ ಆ ದೊಡ್ಡವನಲ್ಲಿ

ನಿನ್ನೆದೆಗೊರಗಿ
ನಿನ್ನ ತೋಳಲ್ಲಿ ಬೆಚ್ಚಗೆ ಮಗುವಾಗಿ ಜೀವನ ಜೇನಾಗಿಸಬಿಡು ಅಂದೆ ಅಷ್ಟೆ...

ಅಥವಾ ನಾ ಕೇಳಿದ್ದು ಅವನಿಗೂ ದುಬಾರಿಯನ್ನಿಸೋ ಅಷ್ಟು ಅಮೂಲ್ಯವೇನೋ
ಅವನ ಉತ್ತರ ಗೊತ್ತಿಲ್ಲ
ನನ್ನ ಹೃದಯವಂತೂ ಹೌದೆನುತಿದೆ
ಎಷ್ಟಂದರೂ ಅದಕ್ಕೆ ನಿನ್ನೊಲುಮೆಗೆ ಬೆಲೆ ಕಟ್ಟಲಾಗದು ಅನ್ನೋ ಸತ್ಯ
ಮೇಲೆ ಕೂತವನಿಗಿಂತ ಚೆನ್ನಾಗಿ ಗೊತ್ತಿದೆ ಅಲ್ಲ್ವಾ
ಈ ಹೃದಯದ ಒಂದೊಂದು ತುಡಿತವೂ ಅದನ್ನೇ ಹಾಡುತ್ತಿದೆ
ಎಂದಾದರೊಂದು ದಿನ ಮೇಲಿನವರೆಗೂ ಕೇಳೀತೇನೋ ಅನ್ನೋ ಹುಚ್ಚು ಹಂಬಲ ಇರಬೇಕು!

Monday, March 5, 2007

ನನ್ನ ದಾರಿ ಕಾಯುತ್ತಾ ನೀನು ರಸ್ತೆ ತುದಿಯಲ್ಲಿ ನಿಲ್ಲುತ್ತಿದ್ದ ದಿನಗಳಲ್ಲಿ...
ಆ ರಸ್ತೆ ಮೇಲೂ ಸ್ವಲ್ಪ ಜಾಸ್ತಿನೇ ಪ್ರೀತಿ ಬರುತಿತ್ತು!
ಗಲ್ಲದ ಮೇಲೆ ಕೈ ಇಟ್ಟು, ರಸ್ತೆಯಲ್ಲಿ ನೋಟ ನೆಟ್ಟು ನಿಂತು...
ನಾ ಕಣ್ಣಿಗೆ ಬಿದ್ದ ತಕ್ಷಣ ಹೂನಗೆಯಿಂದ ಹೃದಯ ಅರಳಿಸುತ್ತಿದ್ದ ನೀನು
ಕಾಣದೇ...
ಈಗ
ಅ ರಸ್ತೆ ಮೇಲೂ ಕೋಪ ಬರುತ್ತೆ! ಹಾಗೇ...
ಅದೂ ನಿನ್ನ ದಾರಿ ಕಾದು ಕಾದು ಸೋತಿದೆಯೇನೋ ಅನ್ನಿಸಿ ಅದರ ಮೇಲೆ ಅನುಕಂಪ...

Friday, March 2, 2007

ದಣಿದ ಮನಕ್ಕೆ ತಂಪಾಗಿ...
ಮೊದಮೊದಲು ಭುವಿಗಿಳಿದ ಮಳೆ ಹನಿಯಂತೆ ಮುದ್ದಾಗಿ ಮನದಾಳಕ್ಕಿಳಿದೆ...

ಬೆಳಗಾದರೆ ನಿನ್ನ ದನಿ ಕೇಳುವ ಖುಶಿ, ನಿನ್ನ ಮಾತುಗಳಲ್ಲಿ ಕರಗಿಹೋಗೋ ಸುಖ... ಸಂಜೆ ಯಾವಾಗ ಆಗುತ್ತೋ ಅಂತ ನಿನ್ನ ಆ ಮಿಂಚುಗಣ್ಣುಗಳಲ್ಲಿ ಬಾಳಹಾದಿಯ ಕನಸುಗಳು ಅರಳೋದನ್ನ ನೋಡ್ತಾ ನಿನ್ನ ಕಿರುನಗೆಯ ಬೆಳಕಲ್ಲಿ ತೊಯ್ದುಹೋಗೋದಕ್ಕೆ ಕಾಯೋ ಸಂಭ್ರಮ...

ಮಳೆ ನಿಂತು ಮೋಡ ಚದುರಿ ಉರಿಬಿಸಿಲು ಸುಡುತ್ತಿರುವಾಗ ಬೆಳಿಗ್ಗೆ ಯಾಕೆ ಆಗುತ್ತೋ ಅನ್ನಿಸಿದರೆ, ಸಂಜೆಗಳು ಭಾರವಾಗಿ ಹೊರಗಿಲ್ಲದ ಮಳೆ ಒಳಗೆ ಕಣ್ಣೀರಾಗಿ ಹರಿದರೆ ನಾನು ಕಾರಣ ಅಲ್ಲ ಅಲ್ಲ್ವಾ...

ಸಂಜೆಗಳು ಮತ್ತೆ ಸಹನೀಯವಾದರೂ ಆಗುತ್ತವಾ ಅನ್ನೋ ಉತ್ತರವಿಲ್ಲದ ಪ್ರಶ್ನೆಯೊಂದಿಗೆ ಮತ್ತದೇ ಬೇಸರದ ಇನ್ನೊಂದು ಸಂಜೆಯೆಡೆಗೆ ನಡಿಯುತ್ತಾ...